ಮಂಡ್ಯ 
	ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿ ಇರುವ ಒಂದು ಜಿಲ್ಲೆ. ಇದೇ ಹೆಸರಿನ ತಾಲ್ಲೂಕು ಮತ್ತು ಪಟ್ಟಣ.

	ಜಿಲ್ಲೆ : ಮೈಸೂರು ವಿಭಾಗಕ್ಕೆ ಸೇರಿರುವ ಈ ಜಿಲ್ಲೆ ಉತ್ತರ ಅಕ್ಷಾಂಶ 12015' ರಿಂದ 13015' ವರೆಗೂ ಪೂರ್ವ ರೇಖಾಂಶ 76015' ರಿಂದ 77020' ವರೆಗೂ ಹಬ್ಬಿದೆ. ಮಂಡ್ಯ ಜಿಲ್ಲೆಯನ್ನು ದಕ್ಷಿಣದಲ್ಲಿ ಮೈಸೂರು, ಆಗ್ನೇಯದಲ್ಲಿ ಚಾಮರಾಜನಗರ, ಪೂರ್ವದಲ್ಲಿ ಬೆಂಗಳೂರು, ಪಶ್ಚಿಮದಲ್ಲಿ ಹಾಸನ ಉತ್ತರದಲ್ಲಿ ತುಮಕೂರು ಜಿಲ್ಲೆಗಳು ಸುತ್ತುವರೆದಿವೆ. ಕೃಷ್ಣರಾಜಪೇಟೆ, ಮದ್ದೂರು, ಮಳವಳ್ಳಿ, ಮಂಡ್ಯ, ನಾಗಮಂಗಲ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ಈ ಜಿಲ್ಲೆಯ ತಾಲ್ಲೂಕುಗಳು. 31 ಹೋಬಳಿಗಳೂ 10 ಪಟ್ಟಣಗಳೂ 1,483 ಗ್ರಾಮಗಳೂ ಇವೆ. ಜಿಲ್ಲೆಯ ವಿಸ್ತೀರ್ಣ 4,961 ಚಕಿಮೀ. 8,87,307 ಪುರುಷರು, 8,74,411 ಮಹಿಳೆಯರೂ ಇರುವ ಈಜಿಲ್ಲಾ. ಜನಸಂಖ್ಯೆ 17,61,718 (2001).

	ಜಿಲ್ಲೆಯ ಅಧಿಕಭಾಗ ಮಟ್ಟಸಬಯಲುಗಳಿಂದ ಕೂಡಿವೆ. ಸಣ್ಣ ಬೆಟ್ಟಗಳೂ ಹೆಚ್ಚು ಎತ್ತರವಲ್ಲದ ಶ್ರೇಣಿಗಳೂ ಅಲ್ಲಲ್ಲಿ ಇವೆ. ಈ ಪ್ರದೇಶ ಸಮುದ್ರಮಟ್ಟದಿಂದ ಸುಮಾರು 762ರಿಂದ 914 ಮೀಟರ್ ಎತ್ತರದಲ್ಲಿದೆ. ಮಳವಳ್ಳಿ ತಾಲ್ಲೂಕಿನ ಪೂರ್ವದ ಅಂಚಿನಲ್ಲಿ ಬಿಳಿಗಿರಿರಂಗನ ಬೆಟ್ಟದ ಸಾಲಿನಿಂದ ಮುಂದುವರಿದ ಕೆಲವು ಬೆಟ್ಟಗಳೂ ಜಿಲ್ಲೆಯ ದಕ್ಷಿಣದ ಅಂಚಿನಲ್ಲಿ ಹುಲಿಕೆರೆ ಮತ್ತು ಕರಿಘಟ್ಟ ಬೆಟ್ಟಗಳೂ ಇವೆ. ಕೃಷ್ಣರಾಜಪೇಟೆ, ನಾಗಮಂಡಲ ಇವುಗಳ ಸುತ್ತಲೂ ಕೆಲವು ಬೆಟ್ಟಗಳುಂಟು. ಇವುಗಳಲ್ಲಿ ಮುಖ್ಯವಾದದ್ದು ಆದಿಚುಂಚನಗಿರಿ. ಮಳವಳ್ಳಿ ತಾಲ್ಲೂಕಿನ ಕಬ್ಬಾಳದುರ್ಗ (1069 ಮೀ), ಶ್ರೀರಂಗಪಟ್ಟಣದ ಬಳಿಯ ಕರಿಘಟ್ಟ (974,44ಮೀ), ಮೇಲುಕೋಟೆ (1,246,32ಮೀ), ನಾರಾಯಣ ದುರ್ಗ (1,246,32ಮೀ) ಇವು ಇತರ ಮುಖ್ಯ ಬೆಟ್ಟಗಳು.

	ಕಾವೇರಿ, ಹೇಮಾವತಿ, ಲೋಕಪಾಮನಿ, ಶಿಂಷಾ, ವೀರವೈಷ್ಣವಿ ಇವು ಇಲ್ಲಿಯ ನದಿಗಳು. ಕಾವೇರಿ ನದಿ ಈ ಜಿಲ್ಲೆಯನ್ನು ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಕೃಷ್ಣರಾಜಸಾಗರದ ಮೇಲುಗಡೆ ಪ್ರವೇಶಿಸಿ, ಮುಂದೆ ರಂಗನತಿಟ್ಟು ಮತ್ತು ಶ್ರೀರಂಗಪಟ್ಟಣ ದ್ವೀಪಗಳನ್ನು ಬಳಸಿ ಮೈಸೂರು ಜಿಲ್ಲೆಯತ್ತ ಸಾಗುತ್ತದೆ. ಪುನಃ ಅದು ಜಿಲ್ಲೆಯ ಆಗ್ನೇಯ ಅಂಚಿನಲ್ಲಿ ಮಳವಳ್ಳಿ ಮತ್ತು ಕೊಳ್ಳೇಗಾಲ ತಾಲ್ಲೂಕುಗಳ ಗಡಿಯಾಗಿ ಹರಿಯುತ್ತದೆ. ಈ ಭಾಗದಲ್ಲಿ ಶಿವಸಮುದ್ರ ದ್ವೀಪವನ್ನು ಬಳಸಿದ್ದು ಅದರ ಸಮೀಪದಲ್ಲಿ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳಾಗಿ ದುಮುಕುತ್ತದೆ. ಹೇಮಾವತಿ ಈ ಜಿಲ್ಲೆಯ ಪಶ್ಚಿಮದ ಅಂಚಿನಲ್ಲಿ ಸ್ವಲ್ಪ ದೂರ ಹಾಸನ, ಮಂಡ್ಯ ಜಿಲ್ಲೆಗಳ ಗಡಿಯಾಗಿ ದಕ್ಷಿಣಭಿಮುಖವಾಗಿ ಹರಿದು ಜಿಲ್ಲೆಯನ್ನು ಕೃಷ್ಣರಾಜಪೇಟೆ ತಾಲ್ಲೂಕಿನ ಗುಡ್ಡೆ ಹೊಸಹಳ್ಳಿಯ ಬಳಿ ಪ್ರವೇಶಿಸಿ ಮುಂದೆ ಕೃಷ್ಣರಾಜಸಾಗರದ ಉತ್ತರದಲ್ಲಿ ಕಾವೇರಿಯನ್ನು ಕೂಡಿಕೊಳುತ್ತದೆ. ಲೋಕಪಾಮನಿ ನಾಗಮಂಗಲ ತಾಲ್ಲೂಕಿನ ಹೊಣಕೆರೆ ಹೋಬಳಿಯಲ್ಲಿ ಹುಟ್ಟಿ, ಪಾಂಡವಪುರಕ್ಕೆ ಪೂರ್ವದಲ್ಲಿ ದಕ್ಷಿಣಾಭಿಮುಖವಾಗಿ ಹರಿದು ಮೋತಿ ತಲಾಬ್ ಹಳ್ಳವನ್ನು ಕೂಡಿಕೊಂಡು, ಶ್ರೀರಂಗಪಟ್ಟಣ ತಾಲ್ಲೂಕಿನ ಕರಿಘಟ್ಟದ ತಪ್ಪಲ ಬಳಿ ಕಾವೇರಿ ನದಿಯನ್ನು ಸೇರುತ್ತದೆ. ಶಿಂಷಾನದಿ ಜಿಲ್ಲೆಯ ಉತ್ತರ ಅಂಚಿನಲ್ಲಿ ಸ್ವಲ್ಪ ದೂರ ತುಮಕೂರು ಮಂಡ್ಯ ಜಿಲ್ಲೆಗಳ ಗಡಿಯಾಗಿ ಆಗ್ನೇಯಾಭಿಮುಖವಾಗಿ ಹರಿದು ಮದ್ದೂರು ತಾಲ್ಲೂಕಿನ ವಾಯುವ್ಯದಲ್ಲಿ ಕಿರಂಗೂರು ಬಳಿ ಈ ಜಿಲ್ಲೆಯನ್ನು ಪ್ರವೇಶಿಸುವುದು. ಮುಂದೆ ದಕ್ಷಿಣಾಭಿಮುಖವಾಗಿ ಮದ್ದೂರು ತಾಲ್ಲೂಕಿನಲ್ಲಿ ಹರಿದು, ಅಲ್ಲಿಂದ ಪೂರ್ವಕ್ಕೆ ತಿರುಗಿ ಮಳವಳ್ಳಿ ತಾಲ್ಲೂಕಿನಲ್ಲಿ ಸಾಗಿ ಶಿವಸಮುದ್ರ ಜಲಪಾತಗಳಿಗೆ ಸ್ವಲ್ಪ ಮುಂದೆ ಕಾವೇರಿಯೊಡನೆ ಸಂಗಮವಾಗುವುದು. 

ಜಿಲ್ಲೆಯ ಉತ್ತರದಲ್ಲಿ ವೀರವೈಷ್ಣವಿನದಿ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಹೋಬಳಿಯಲ್ಲಿ ಜಿಲ್ಲೆಯನ್ನು ಪ್ರವೇಶಿಸಿ, ಪೂರ್ವಾಭಿಮುಖವಾಗಿ ಹರಿದು, ಮುಂದೆ ಶಿಂಷಾ ನದಿಯನ್ನು ಸೇರುವುದು. ಇವಲ್ಲದೆ ಬಿಂಡೇನಹಳ್ಳಿ, ತೊರೆ ಹಂದಿಹಳ್ಳ, ಹೆಬ್ಬಳ್ಳ ಮತ್ತು ಭೀಮಾ ಮೊದಲಾದ ತೊರೆಗಳೂ ಈ ಜಿಲ್ಲೆಯಲ್ಲಿ ಹರಿಯುತ್ತವೆ.

	ಜಿಲ್ಲೆಯ ಅಧಿಕಭಾಗ ನೈಸ್ ಶಿಲಾಪ್ರದೇಶ. ಸಾಮಾನ್ಯವಾಗಿ ಈ ಶಿಲೆ ಬೂದುಬಣ್ಣದ್ದಾಗಿದ್ದು ಪದರಯುತವಾಗಿರುತ್ತದೆ. ಚಿನಕುರುಳಿ ಬಳಿ ಇಂಥ ಶಿಲೆಯ ಸ್ವರೂಪ ಸ್ಪಷ್ಟವಾಗಿ ಕಾಣುತ್ತದೆ. ಕೃಷ್ಣರಾಜಪೇಟೆ, ಮೇಲುಕೋಟೆ, ಸಿಂದಘಟ್ಟ ಮುಂತಾದೆಡೆಗಳಲ್ಲಿ ಸ್ವಲ್ಪ ಭಿನ್ನರೀತಿಯ ನೈಸ್ ಶಿಲೆಗಳಿವೆ. ಧಾರವಾಡ ಶಿಲಾವರ್ಗದ ಶಿಸ್ಟ್ ಕಲ್ಲುಗಳು ಹೆಚ್ಚು ಅಗಲವಿಲ್ಲದ ಪಟ್ಟೆಗಳು ಉದ್ದುದ್ದವಾಗಿ ಜಿಲ್ಲೆಯ ಹಲವೆಡೆ ಸಾಗಿವೆ. ಪಾರ್ಫಿರಿ ಜಾತಿಯ ಉತ್ತಮ ಕಲ್ಲುಗಳ ಹರವುಗಳು ಜಿಲ್ಲೆಯ ತಗಳವಾಡಿ, ಸಿದ್ಧಲಿಂಗಪುರ, ಕನಗಟ್ಟಿ, ನಾರಣಕೆರೆ, ತುರಗನೂರು ಮೊದಲಾದೆಡೆಗಳಲ್ಲಿ ಇವೆ.

	ಉಪಯುಕ್ತ ಖನಿಜಗಳು ಹೆಚ್ಚಿಲ್ಲ. ಹದನೂರು ಮತ್ತು ಬೆಳ್ಳಿ ಬೆಟ್ಟ ಶ್ರೇಣಿಗಳಲ್ಲಿ ಕಲ್ನಾರು, ಕೃಷ್ಣರಾಜಸಾಗರಕ್ಕೆ ಉತ್ತರದಲ್ಲಿ ನೀಲ-ಹಸುರಿನ ಬೆರಿಲ್ ಶಿಲೆಗಳೂ ಶೀಲನೆರೆ ಸರಹದ್ದಿನಲ್ಲಿ ಸಾಮಾನ್ಯ ದರ್ಜೆಯ ಕ್ರೋಮೈಟ್ ಖನಿಜ, ಮದ್ದೂರು, ಮಳವಳ್ಳಿ ಹಾಗೂ ಹಲಗೂರು ಬಳಿ ಕಬ್ಬಿಣದ ಅದುರು, ಮೇಲುಕೋಟೆ ಬಳಿ ಬಿಳಿ ಜೇಡಿ, ಹೆಬ್ಬಳ್ಳದ ದಂಡೆಗಳಲ್ಲಿ ಸುಣ್ಣ ಕಂಕರು, ವೇದ ಸಮುದ್ರದ ಬಳಿ ಕಾಗೆಬಂಗಾರ ಸ್ವಲ್ಪಮಟ್ಟಿಗೆ ದೊರೆಯುವುವು.

	ಮಾರ್ಚ್‍ನಿಂದ ಮೇ ತನಕ ಬೇಸಗೆ. ಜೂನ್, ಜುಲೈ, ಆಗಸ್ಟ್ ತಿಂಗಳುಗಳಲ್ಲಿ ಮುಂಗಾರು ಮಳೆಗಾಲ. ನವೆಂಬರ್-ಜನವರಿ ಚಳಿಗಾಲ. ಜಿಲ್ಲೆಯ ಉಷúತೆಯಲ್ಲಿ ಅತ್ಯಧಿಕ ವ್ಯತ್ಯಾಸಗಳಿಲ್ಲದೆ ವರ್ಷಪೂರ್ತ ಹವೆ ಹಿತಕರವಾಗಿರುವುದು. ವರ್ಷಕ್ಕೆ ಸರಾಸರಿ ಮಳೆ ದಿನಗಳು 45. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ 691.2 ಮಿಮೀ. ಈ ಜಿಲ್ಲೆಯ ಉತ್ತರ ಪಶ್ಚಿಮ ಹಾಗೂ ಪೂರ್ವಭಾಗಗಳು ಮೈದಾನ ಪ್ರದೇಶ. ದಕ್ಷಿಣ ಭಾಗದಲ್ಲಿ ಕಾವೇರಿ ನದಿ ಹರಿವಿನುದ್ದಕ್ಕೂ ಗಿಡ್ಡು ಮರಗಳ ಕಾಡು ಹಾಗೂ ಪೊದೆಗಳಿವೆ. ಜಿಲ್ಲೆಯಲ್ಲಿ ಒಟ್ಟು 100.1 ಚ.ಕಿ.ಮೀ. ಅರಣ್ಯ ಪ್ರದೇಶವಿದ್ದು ಅದರಲ್ಲಿ ಜಾಲರಿ, ಅಳಲೆ, ದಿಂಡಿಗೆ, ಹೊಂಗೆ, ದೇವದಾರು, ಚುಜ್ಜಲು, ಚುನ್ನಂಗಿ, ಬುರುಬರು, ಬಿಲ್ಮತ್ತಿ, ಹುಣಿಸೆ ಮೊದಲಾದ ಮರಗಳು ಬೆಳೆಯುತ್ತವೆ. ಕಾವೇರಿ ನದಿಯ ಅಂಚಿನ ಬೆಟ್ಟ ಮತ್ತು ಕಾಡುಗಳಲ್ಲಿ ಚಿರತೆ, ನರಿ, ಕಾಡುನಾಯಿ, ಕಾಡುಹಂದಿ, ನವಿಲು, ಜಿಂಕೆ, ಮೊಲ, ಮುಳ್ಳುಹಂದಿ, ನಾಗರಹಾವು ಮತ್ತು ಹೆಬ್ಬಾವುಗಳೂ ಮೈನ, ಕವುಜುಗ, ಕಾಡುಪಾರಿವಾಳ, ಕಾಡುಕೋಳಿ, ಗಿಳಿ, ಕೋಗಿಲೆ ಹಾಗೂ ನೀರುಹಕ್ಕಿಗಳೂ ಕಂಡುಬರುವುವು.

	ಕೃಷ್ಣರಾಜಸಾಗರದ ವಿಶ್ವೇಶ್ವರಯ್ಯ ನಾಲೆ ಜಿಲ್ಲೆಯ ಜೀವನಾಡಿ. ಈ ನಾಲೆ ತನ್ನ ಅನೇಕ ಶಾಖೆಗಳೊಡನೆ ಮಂಡ್ಯ ಜಿಲ್ಲೆಯ ವಿಸ್ತಾರ ಪ್ರದೇಶಕ್ಕೆ ನೀರೊದಗಿಸುತ್ತದೆ. ಇದಲ್ಲದೆ ಸೀತಾಪುರದ ಬಳಿ ಮಾಡದಕಟ್ಟೆಯಿಂದ ಹೊರಡುವ ದೇವರಾಯನಾಲೆ, ಇದರ ಸಮೀಪದಲ್ಲಿ ಇರುವ ದೇವರಾಯಕಟ್ಟೆಯಿಂದ ಹೊರಡುವ ನಾಲೆ, ಮಂಡ್ಯ ತಾಲ್ಲೂಕಿನ ಹುಲಿಕೆರೆ ಬಳಿಯ ಸುರಂಗ ನಾಲೆ. ಬೆಳಗೊಳದ ಸಮೀಪದಲ್ಲಿರುವ ವಿರಜಾನದಿ ನಾಲೆ, ಪಶ್ಚಿಮ ವಾಹಿನಿಯ ಹತ್ತಿರ ಇರುವ ಬಂಗಾರದೊಡ್ಡಿ ನಾಲೆ ಇವು ಇತರ ಮುಖ್ಯ ನಾಲೆಗಳು. ಇವಲ್ಲದೆ ಕೆಮ್ಮಣ್ಣುನಾಲೆ, ವೈದ್ಯನಾಥಪುರ ನಾಲೆ, ಬೈರನನಾಲೆ, ಚಾಮನಹಳ್ಳಿ, ಮಂದಗೆರೆ, ಹೇಮಗಿರಿ, ಅಕ್ಕಿಹೆಬ್ಬಾಳ ಹೆಸರಿಸಬಹುದಾದ ಇತರ ನಾಲೆಗಳು. ಕೃಷ್ಣರಾಜಸಾಗರ ನಿರ್ಮಿಸುವುದಕ್ಕಿಂತ ಮೊದಲಿನಿಂದಲೂ ಜಿಲ್ಲೆಯಲ್ಲಿ ಕಾವೇರಿ ಮತ್ತು ಅದರ ಉಪನದಿಗಳ ನೀರನ್ನು ಚಿಕ್ಕ ಅಣೆಕಟ್ಟುಗಳ ಮೂಲಕ ಕೃಷಿಗೆ ಉಪಯೋಗಿಸಿಕೊಳ್ಳಲಾಗುತ್ತಿತ್ತು. ಇವುಗಳಲ್ಲಿ ಹೇಮಾವತಿ ನದಿಗೆ ಮಂದಗೆರೆ ಬಳಿ ಕಟ್ಟಿರುವ ಮಂದಗೆರೆ ಅಣೆಕಟ್ಟು, ಶಿಂಷಾನದಿಗೆ ಕಟ್ಟಿರುವ ತಗ್ಗಳ್ಳಿ ಅಣೆಕಟ್ಟು ಹಳೆಯವು. ತಗ್ಗಳ್ಳಿಯ ಹತ್ತಿರ ಬಂಡಿಹೊಳೆ ಬಳಿ ಕಟ್ಟಿರುವ ಹೇಮಗಿರಿ ಅಣೆಕಟ್ಟು ಮತ್ತು ಲೋಕಪಾವನಿ ನದಿಗೆ ಕಟ್ಟಿರುವ ಬೊಳೇನಹಳ್ಳಿ ಅಣೆಕಟ್ಟು, ಉಯ್ಯನಹಳ್ಳಿ ಬಳಿ ಲೋಕಪಾವನಿಗೆ ಕಟ್ಟಿರುವ ಉಯ್ಯನ ಹಳ್ಳಿ ಅಣೆಕಟ್ಟು, ದುಮ್ಮಸಂದ್ರದ ಬಳಿ ವೀರವೈಷ್ಣವಿನದಿಗೆ ಕಟ್ಟಿರುವ ದುಮ್ಮಸಂದ್ರ ಅಣೆಕಟ್ಟು, ಭೀಮಾತೊರೆಗೆ ದಳವಾಯಿ ಕೋಡಿಹಳ್ಳಿ ಬಳಿ ಕಟ್ಟಿರುವ ಅಣೆಕಟ್ಟು ಇವು ಈಚಿನ ನಿರ್ಮಾಣಗಳು. ಮೋತಿತಲಾಬ್, ಹೆರಗೋನಹಳ್ಳಿ ಕೆರೆ, ಸಿಂದಘಟ್ಟದ ಕೆರೆ ಇವು ಹೆಸರಿಸಬಹುದಾದ ಕೆರೆಗಳು. 

	ಜಿಲ್ಲೆಯ ವ್ಯವಸಾಯಯೋಗ್ಯ ಭೂಮಿ ಜೇಡಿಮಣ್ಣು ಮತ್ತು ಮರಳುಮಿಶ್ರಿತ ಕೆಂಪು ಜೇಡಿಮಣ್ಣಿನಿಂದ ಕೂಡಿದೆ. ಜಿಲ್ಲೆಯ ಮುಖ್ಯ ಬೆಳೆಗಳು ಬತ್ತ ಮತ್ತು ಕಬ್ಬು, ರಾಗಿ, ದ್ವಿದಳಧಾನ್ಯಗಳು, ಜೋಳ, ತೆಂಗು ಕಡಲೆಕಾಯಿ ಇವನ್ನೂ ಬೆಳೆಸುತ್ತಾರೆ. ಜಿಲ್ಲೆಯ ಪೂರ್ವ ಮತ್ತು ದಕ್ಷಿಣದ ಭಾಗದಲ್ಲಿ ನೀರಾವರಿ ಬೇಸಾಯ ವಿಶೇಷ. ಪಶ್ಚಿಮ ಮತ್ತು ಉತ್ತರದ ತಾಲ್ಲೂಕುಗಳಲ್ಲಿ ಹೆಚ್ಚು ಮಟ್ಟಿಗೆ ಒಣ ಬೇಸಾಯ. 1977ರ ಅಂಕೆಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಬಿತ್ತನೆಯಾದ ಒಟ್ಟು ಕ್ಷೇತ್ರ 2,72,267 ಹೆಕ್ಟೇರುಗಳು. ನೀರಾವರಿ ಕ್ಷೇತ್ರ 86.569 ಹೆಕ್ಟೇರುಗಳು. 1970-71ರಲ್ಲಿ ಈ ಜಿಲ್ಲೆಯಲ್ಲಿ 2,54,443 ಹೆಕ್ಟೇರುಗಳಲ್ಲಿ ಆಹಾರ ಬೆಳೆಗಳನ್ನೂ 3837 ಹೆಕ್ಟೇರುಗಳಲ್ಲಿ ಆಹಾರೇತರ ಬೆಳೆಗಳನ್ನೂ ಬೆಳೆಸಲಾಗಿತ್ತು.

	ಮೊದಲಿನಿಂಲೂ ಹತ್ತಿಬಟ್ಟೆ, ಕಂಬಳಿ, ಹಿತ್ತಾಳೆ ಪಾತ್ರೆಗಳು, ಬೆಲ್ಲ ಇವುಗಳಿಗೆ ಈ ಜಿಲ್ಲೆ ಹೆಸರಾದ್ದು. ಪಾಲಹಳ್ಳಿಯಲ್ಲಿ 1847ರಲ್ಲಿ ಅಷ್ಟಗ್ರಾಮ ಷುಗರ್ ವಕ್ರ್ಸ್ ಸ್ಥಾಪಿತವಾಗಿತ್ತು. ಇಲ್ಲಿಯ ಹರಳು ಸಕ್ಕರೆ ಉತ್ತಮ ಗುಣಮಟ್ಟದ್ದೆಂದು 1851 ಮತ್ತು 1861ರ ಲಂಡನ್ ವಸ್ತು ಪ್ರದರ್ಶನದಲ್ಲಿ ಬಹುಮಾನ ಮತ್ತು ಪದಕಗಳನ್ನು ಗಳಿಸಿತ್ತು. ಈ ಕಾರ್ಖಾನೆ 1894ರಲ್ಲಿ ನಿಂತುಹೋಯಿತು. ಈ ಉದ್ಯಮದ ಉಪಾಂಗವಾಗಿ ಮದ್ಯಸಾರ ತಯಾರಿಸಲಾಗುತ್ತಿತ್ತು. ನಾಗಮಂಗಲದ ಹಿತ್ತಾಳೆಯ ವಿಗ್ರಹ, ಪಾತ್ರೆ, ದೀಪಸ್ತಂಭ ಮುಂತಾದವು ಬಲು ಪ್ರಸಿದ್ಧ. ಹಿಂದಿನಿಂದಲೂ ಗಂಜಾಮ್, ಸಿಂದಘಟ್ಟ ರೇಷ್ಮೆ ನೇಯ್ಗೆ ಬಟ್ಟೆಗಳಿಗೆ ಹೆಸರಾದವು.

	ಮಂಡ್ಯಜಿಲ್ಲೆಯ ಬೃಹತ್ ಕೈಗಾರಿಕೆ ಮೈಸೂರು ಶುಗರ್ ಕಂಪನಿಯ ಪ್ರಾರಂಭದೊಡನೆ ಆಯಿತೆನ್ನಬಹುದು (1933). ಇದು ಕರ್ನಾಟಕದ ಹಳೆಯ ಮತ್ತು ದೊಡ್ಡ ಸಕ್ಕರೆ ಕಾರ್ಖಾನೆಗಳಲ್ಲೊಂದು. ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ 1959 ಸೆಪ್ಟಂಬರ್ 14ರಿಂದ ಕೆಲಸ ಆರಂಭಿಸಿತು. ಮದ್ದೂರು ತಾಲ್ಲೂಕಿನ ಕಾಳಮುದ್ದನದೊಡ್ಡಿಯಲ್ಲಿ ಚಾಮುಂಡೇಶ್ವರಿ ಷುಗರ್ ಮಿಲ್ಸ್ ಸ್ಥಾಪನೆಗೊಂಡಿದೆ (1974). ಈ ಮೂರು ಸಕ್ಕರೆ ಕಾರ್ಖಾನೆಗಳಿಗೂ ಜಿಲ್ಲೆಯಲ್ಲಿ ಬೆಳೆಯುವ ಕಬ್ಬು ಸರಬರಾಜಾಗುವುದು. ಇವುಗಳಲ್ಲಿ ನಾನಾಬಗೆಯ ಆಲ್ಕೊಹಾಲ್, ಅಸಿಟಿಕ್ ಆಸಿಡ್, ಬ್ರಾಂದಿ, ಬೀರ್, ವ್ಹಿಸ್ಕಿ, ರಮ್, ಜಿನ್ ಮುಂತಾದ ಮಾದಕ ಪಾನೀಯಗಳೂ ತಯಾರಾಗುತ್ತಿವೆ. ಮಂಡ್ಯ ಮತ್ತು ನಗುವನಹಳ್ಳಿಯಲ್ಲಿ ಖಂಡಸಾರಿ ಉತ್ಪಾದನೆಯುಂಟು. ಕಬ್ಬಿನ ಸಿಪ್ಪೆಯ ಉಪಯೋಗದಿಂದ ಕಾಗದವನ್ನು ಈ ಜಿಲ್ಲೆಯ ಬೆಳಗೊಳದಲ್ಲಿರುವ ಮಂಡ್ಯ ನ್ಯಾಷನಲ್ ಪೇಪರ್ ಮಿಲ್ಸ್ ತಯಾರಿಸುತ್ತಿದೆ. ಈ ಕಾರ್ಖಾನೆ 1962ರಲ್ಲಿಯೂ ರಾಸಾಯನಿಕ ವಸ್ತುಗಳನ್ನು ತಯಾರಿಸುವ ಮೈಸೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಕಾರ್ಖಾನೆ 1940ರಲ್ಲಿಯೂ ಕಾರ್ಯಾರಂಭ ಮಾಡಿದುವು. ಕಾಪರ್ ಸಲ್ಪೇಟನ್ನು ಭಾರತದಲ್ಲೇ ಮೊದಲು ತಯಾರಿಸಿದ ಕೀರ್ತಿ ಈ ಕಾರ್ಖಾನೆಯದು. ಇಲ್ಲಿ ರಾಸಾಯನಿಕ ಗೊಬ್ಬರ ತಯಾರಿಕೆಯೂ ಉಂಟು. ಅಲೈಡ್ ರೆಸಿನ್ಸ್ ಅಂಡ್ ಕೆಮಿಕಲ್ಸ್ ಎಂಬ ಕಾರ್ಖಾನೆ ಬೆಳಗೊಳದಲ್ಲಿ ಪ್ರಾರಂಭವಾಯಿತು (1965). ಛಾಯಾಚಿತ್ರ ಉದ್ಯಮಕ್ಕೆ ಬೇಕಾದ ರಾಸಾಯನಿಕ ವಸ್ತುಗಳನ್ನು ತಯಾರಿಸುವ ಮೈಸೂರು ಅಸಿಟೇಟ್ ಅಂಡ್ ಕೆಮಿಕಲ್ಸ್ ಕಂಪನಿ ಮಂಡ್ಯದಲ್ಲಿದೆ. 1966 ಜುಲೈನಿಂದ ಮಂಡ್ಯದ ಇಂಪ್ಲಿಮೆಂಟ್ಸ್ ಫ್ಯಾಕ್ಟರಿ ಕಾರ್ಯೋನ್ಮುಖವಾಗಿದೆ.

	ಬತ್ತ ಹೆಚ್ಚು ಬೆಳೆಯುವ ಈ ಜಿಲ್ಲೆಯಲ್ಲಿ ಅಕ್ಕಿಗಿರಣಿಗಳೂ ಹೆಚ್ಚಾಗಿವೆ. ಮಂಡ್ಯ, ಮದ್ದೂರು, ಮಳವಳ್ಳಿ ಮತ್ತು ನಾಗಮಂಗಲ ತಾಲ್ಲೂಕುಗಳಲ್ಲಿ ರೇಷ್ಮೆ ಉತ್ಪಾದನೆ ಉಂಟು. ಮಳವಳ್ಳಿ ಮತ್ತು ಮದ್ದೂರುಗಳಲ್ಲಿ ರೇಷ್ಮೆ ಕೋಠಿಗಳಿವೆ. ಸರ್ಕಾರಿ ಹಿಪ್ಪುನೇರಳೆ ಸಸಿಪೋಷಣೆ ಮತ್ತು ತರಬೇತಿಕೇಂದ್ರ ಮದ್ದೂರಿನಲ್ಲಿದೆ. ಈ ಜಿಲ್ಲೆ ಕೈಮಗ್ಗದ ಬಟ್ಟೆಗೂ ಪ್ರಸಿದ್ಧ. ಮೇಲುಕೋಟೆ, ತಳಗವಾದಿ, ಕೊಡೆಯಾಲ ಹೊಸಹೊಳಲು, ಕಿಕ್ಕೇರಿ ಇವುಗಳಲ್ಲಿ ತಯಾರಾಗುವ ಕೈಮಗ್ಗದ ಹತ್ತಿ ಮತ್ತು ರೇಷ್ಮೆ ಉತ್ಪನ್ನಗಳು ಉತ್ತಮವಾದವೆಂದು ಪರಿಗಣಿತವಾಗಿವೆ. ನಿಡಘಟ್ಟದ ಬಳಿ ತೆಂಗಿನನಾರಿನ ಕೈಗಾರಿಕಾ ಕೇಂದ್ರವಿದೆ. ಮಂಡ್ಯ ಮತ್ತು ಶ್ರೀರಂಗಪಟ್ಟಣಗಳಲ್ಲಿ ಜೇನುಸಾಕಣೆ ಕೇಂದ್ರಗಳಿವೆ. ಪಾದರಕ್ಷೆ, ಮಣ್ಣಿನ ವಸ್ತುಗಳು, ಹಿತ್ತಾಳೆಪಾತ್ರೆ, ವಿಗ್ರಹ ಮುಂತಾದವುಗಳ ತಯಾರಿಕೆ, ಚಾಪೆ, ನೇಯ್ಗೆ, ಮರಗೆಲಸ, ಕಬ್ಬಿಣಕೆಲಸ ಮುಂತಾದವು ಈ ಜಿಲ್ಲೆಯ ಮುಖ್ಯ ಗೃಹಕೈಗಾರಿಕೆಗಳು.

	ಜಿಲ್ಲೆಯ ಕೈಗಾರಿಕೆಗಳಿಗೆ ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ವಿದ್ಯುತ್ ಸರಬರಾಜಿದೆ. ಇಡೀ ಭಾರತ ಮತ್ತು ಏಷ್ಯದಲ್ಲೇ ಪ್ರಪ್ರಥಮವಾಗಿ (1902) ಜಲವಿದ್ಯುತ್ ಉತ್ಪಾದಿಸಿದ್ದು ಈ ಜಿಲ್ಲೆಗೇ ಸೇರಿರುವ ಶಿವಸಮುದ್ರದಲ್ಲಿ. ಪ್ರಾರಂಭದಲ್ಲಿ 4,500 ಕಿ.ಮೀ. ವಿದ್ಯುತ್ ಉತ್ಪಾದನೆ ಇದ್ದದ್ದು 1939ರಲ್ಲಿ 42,000 ಕಿ.ವಾ.ಗೆ ಏರಿತು. ಶಿಂಷಾ ವಿದ್ಯುದಾಗಾರ 17,200 ಕಿ.ವಾ. ವಿದ್ಯುತ್ ಉತ್ಪಾದನೆಯೊಂದಿಗೆ ಪ್ರಾರಂಭವಾಯಿತ್ತು. (1940)

	ಜಿಲ್ಲೆಯ ಕೃಷಿ ಮತ್ತು ಕೈಗಾರಿಕೋದ್ಯಮಿಗಳಿಗೆ ಆರ್ಥಿಕ ನೆರವು ನೀಡಲು ವಾಣಿಜ್ಯ ಬ್ಯಾಂಕುಗಳು, ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕುಗಳು, ಕೇಂದ್ರ ಸಹಕಾರ ಬ್ಯಾಂಕಿನ ಶಾಖೆಗಳು ಇವೆ. ಒಂದು ಕೈಗಾರಿಕಾ ಸಹಕಾರ ಬ್ಯಾಂಕೂ ಇದೆ. ಇವಲ್ಲದೆ ಜಿಲ್ಲೆಯಲ್ಲಿ ಕೃಷಿ ಸಾಲ ಸಹಕಾರ ಸಂಘಗಳೂ ಕೃಷಿ ಯೇತರ ಸಾಲ ಸಂಘಗಳೂ ಇವೆ. ಜೊತೆಗೆ ಸಣ್ಣ ಪ್ರಮಾಣದ ಕೈಗಾರಿಕಾಯೋಜನೆಗಳಿಗೆ ಮತ್ತು ಕೈಗಾರಿಕಾ ಘಟಕಗಳಿಗೆ ಕರ್ನಾಟಕ ರಾಜ್ಯ ಹಣಕಾಸು ಕಾರ್ಪೊರೇಷನ್ ಹಣಕಾಸಿನ ನೆರವು ನೀಡಿದೆ. ಮಂಡ್ಯ ಮತ್ತು ನಾಗಮಂಗಲಗಳಲ್ಲಿ ಸರ್ಕಾರ ಕೈಗಾರಿಕಾ ನಿವೇಶನಗಳನ್ನು ನಿರ್ಮಿಸಿದೆ.

	ಜಿಲ್ಲೆಗಳಲ್ಲಿ ಉತ್ತಮ ಮಾರ್ಗ ಸಂಪರ್ಕಗಳುಂಟು. ಮೈಸೂರು-ಬೆಂಗಳೂರು ರೈಲುಮಾರ್ಗ ಜಿಲ್ಲೆಯ ಮೂಲಕ ಹಾದು ಹೋಗಿದೆ. ಶ್ರೀರಂಗಪಟ್ಟಣ, ಪಾಂಡವಪುರ ಮಂಡ್ಯ ಮತ್ತು ಮದ್ದೂರು ಮುಖ್ಯ ನಿಲ್ದಾಣಗಳು. ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿ ಸಹ ಈ ಜಿಲ್ಲೆಯ ಮೂಲಕ ಹೋಗತ್ತದೆ. ಅಲ್ಲದೆ ಜಿಲ್ಲೆಯ ಎಲ್ಲ ಮುಖ್ಯ ಸ್ಥಳಗಳಿಗೂ ಸುಮಾರು ಎಲ್ಲ ಗ್ರಾಮಗಳಿಗೂ ರಸ್ತೆ ಸಂಪರ್ಕವಿದೆ. 1977ರ ಅಂಕೆ ಅಂಶಗಳ ಪ್ರಕಾರ ಜಿಲ್ಲೆಯಲ್ಲಿದ್ದ ರಸ್ತೆಗಳ ಒಟ್ಟು ಉದ್ದ 1655 ಕಿ.ಮೀ.

	ಶಿಕ್ಷಣ ಕ್ಷೇತ್ರದಲ್ಲೂ ಈ ಜಿಲ್ಲೆ ತ್ವರಿತವಾಗಿ ಮುನ್ನಡೆದಿದೆ. ಇಲ್ಲಿ ಸರ್ಕಾರವಲ್ಲದೆ ಖಾಸಗೀ ಸಂಸ್ಥೆಗಳೂ ಹಲವಾರು ವಿದ್ಯಾಸಂಸ್ಥೆಗಳನ್ನೂ ಕಟ್ಟಿವೆ. ಶಿಶುವಿಹಾರ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು ಪ್ರೌಢಶಾಲೆಗಳು, ಜೂನಿಯರ್ ಹಾಗು ಕಲಾ ಮತ್ತು ವಿe್ಞÁನ ಕಾಲೇಜುಗಳು ಎಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಇವೆ. ನ್ಯಾಯ ಶಿಕ್ಷಣ ಕಾಲೇಜ್ ಮತ್ತು ವಾಣಿಜ್ಯ ಶಿಕ್ಷಣಸೌಕರ್ಯವೂ ಉಂಟು. ಮಂಡ್ಯ ಮದ್ದೂರು ಮತ್ತು ನಾಗಮಂಗಲದಲ್ಲಿ ಮೂಲ ಶಿಕ್ಷಣ ಕೇಂದ್ರಗಳಿವೆ. ಮಂಡ್ಯ ಜಿಲ್ಲೆಯಲ್ಲಿ ಕೃಷಿ ಮತ್ತು ಅದಕ್ಕೆ ಸಂಬಂಧಪಟ್ಟಂತೆ ಶಿಕ್ಷಣಾವಕಾಶ ಕಲ್ಪಿಸಲಾಗಿದೆ. ಶಿವಾರಗುಡ್ಡದಲ್ಲಿರುವ ವಿದ್ಯಾಪೀಠದಲ್ಲಿ ವಯಸ್ಕರ ಶಿಕ್ಷಣ ವ್ಯವಸ್ಥೆ ಇದೆ. ಡೆನ್ಮಾರ್ಕಿನ ಯೋಜನೆಯಂತೆ ಇಲ್ಲಿ ತಾಂತ್ರಿಕ ಮತ್ತು ಸುಧಾರಿತ ಬೇಸಾಯ ಪದ್ಧತಿಯಲ್ಲಿ ಮತ್ತು ಕೋಳಿ ಸಾಕಣೆಯಲ್ಲಿ ತರಬೇತಿ ನೀಡಲಾಗುತ್ತದೆ. ಆದಿಚುಂಚನಗಿರಿ ಒಂದು ದೊಡ್ಡ ವಿದ್ಯಾಕೇಂದ್ರ. ನಾಗಮಂಗಲ ಮತ್ತು ಮಳವಳ್ಳಿಗಳಲ್ಲಿ ಗೃಹ ಕೈಗಾರಿಕಾ ತರಬೇತಿ ಕೇಂದ್ರಗಳಿವೆ.

	ಸಾಂಸ್ಕøತಿಕ ರಂಗದಲ್ಲಿ ಈ ಜಿಲ್ಲೆಯ ಸಾಧನೆ ಸಾಕಷ್ಟಿದೆ. ಇಲ್ಲಿಯ ಜನ ಅನೂಚಾನವಾಗಿ ಬಂದ ಜನಪದ ಸಾಹಿತ್ಯ ಮತ್ತು ಕಲೆಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ದೊಡ್ಡಾಟ ಪೂಜಾಕುಣಿತ ಸೋಮನಕುಣಿತ ಮೊದಲಾದವು ಇಲ್ಲಿಯ ಅನೇಕ ಸ್ಥಳಗಳಲ್ಲಿ ಇನ್ನೂ ಪ್ರಚಲಿತವಾಗಿವೆ.

	ಪ್ರಾಗೈತಿಹಾಸಿಕ ಕಾಲದಿಂದಲೂ ಜನವಸತಿಯಿದ್ದ ಪ್ರದೇಶವಿದು. ಇಲ್ಲಿಯ ಬೆಳಕವಾಡಿ, ಮುತ್ತತ್ತಿ, ಪಾಂಡವಪುರ ಮೊದಲಾದೆಡೆಗಳಲ್ಲಿ ನವಶಿಲಾಯುಗ, ಕಬ್ಬಿಣ ಯುಗ ಮತ್ತು ಆದಿಚಾರಿತ್ರಿಕ ಕಾಲದ ನೆಲೆಗಳು ಕಂಡುಬಂದಿವೆ. ಜಿಲ್ಲೆಯ ಇತಿಹಾಸ ಪ್ರಾರಂಭವಾಗುವುದು ಸುಮಾರು 4ನೆಯ ಶತಮಾನದಿಂದ. ಆಗ ಈ ಜಿಲ್ಲೆಯ ಅಧಿಕಭಾಗ ತಲಕಾಡಿನ ಗಂಗರಿಗೆ ಸೇರಿತು, ಶಿಂಷಾಕಣಿವೆಯ ಪ್ರದೇಶಕ್ಕೆ ಚಿಕ್ಕಗಂಗವಾಡಿ ಎಂಬ ಹೆಸರಿತ್ತು. 9ನೆಯ ಶತಮಾನದಲ್ಲಿ ಈ ಪ್ರದೇಶ ರಾಷ್ಟ್ರಕೂಟರ ವಶವಾಯಿತು. ಮತ್ತೆ 10ನೆಯ ಶತಮಾನದಲ್ಲಿ ಗಂಗರ ಆಳ್ವಿಕೆ ಇಲ್ಲಿ ನೆಲೆಗೊಂಡರೂ 1004ರಲ್ಲಿ ಚೋಳರ ಕೈಸೇರಿತು. ಆಗ ಈ ಜಿಲ್ಲೆ ರಾಜ್ಯದ ಮುಡಿಕೊಂಡ ಚೋಳಮಂಡಲ ಪ್ರಾಂತ್ಯದ ಭಾಗವಾಗಿತ್ತು. ಶಿವಸಮುದ್ರ ಹಾಗೂ ಮಳವಳ್ಳಿ ಭಾಗಗಳಿಗೆ ರಾಜೇಂದ್ರ ಜೋಳವಳನಾಡು ಎಂಬ ಹೆಸರಿತ್ತು. ವಿಷ್ಣುವರ್ಧನ ತಲಕಾಡನ್ನು ಗೆದ್ದ ಮೇಲೆ ಮಂಡ್ಯ ಜಿಲ್ಲೆಯ ಪ್ರದೇಶ ಹೊಯ್ಸಳ ರಾಜ್ಯಕ್ಕೆ ಸೇರಿತು. ಮೇಲುಕೋಟೆಯ ಬಳಿ ಇರುವ ತೊಣ್ಣೂರು ಹೊಯ್ಸಳ ವಿಷ್ಣುವರ್ಧನನ ಉಪರಾಜಧಾನಿಯಾಗಿತ್ತೆಂಬ ಹೇಳಿಕೆ ಇದೆ. ಹೊಯ್ಸಳರ ಅನಂತರ ಈ ಭಾಗ ವಿಜಯನಗರ ಅರಸನಿಗೆ ಸೇರಿತು. ಆಗ ಜಿಲ್ಲೆಯ ಅಧಿಕಭಾಗ ವಿಜಯನಗರ ಸಾಮಂತರಾಗಿದ್ದ ನಾಗಮಂಗಲ ಮತ್ತು ಚನ್ನಪಟ್ಟಣದ ಪಾಳೆಯಗಾರರ ಅಧೀನದಲ್ಲಿತ್ತೆಂದು ತೋರುತ್ತದೆ. 1454ರಲ್ಲಿ ನಾಗಮಂಗಲದ ತಿಮ್ಮಒಡೆಯ ವಿಜಯನಗರದ ಅರಸರ ಅಪ್ಪಣೆ ಪಡೆದು ಶ್ರೀರಂಗಪಟ್ಟಣದ ಕೋಟೆ ಕಟ್ಟಿಸಿದ. ಅಂದಿನಿಂದ ಈ ಪಟ್ಟಣ ಅಭಿವೃದ್ಧಿಹೊಂದಿ 16ನೆಯ ಶತಮಾನದಲ್ಲಿ ಇಲ್ಲಿ ವಿಜಯನಗರದ ರಾಜಪ್ರತಿನಿಧಿಗಳೂ ನೆಲಸಿದ್ದರು. ಮೈಸೂರು ರಾಜಒಡೆಯ ಶ್ರೀರಂಗಪಟ್ಟಣವನ್ನು ಆಕ್ರಮಿಸಿ (1610) ಅದನ್ನು ರಾಜಧಾನಿಯಾಗಿ ಮಾಡಿಕೊಂಡದ್ದಲ್ಲದೆ ಜಿಲ್ಲೆಯ ಅಧಿಕ ಭಾಗವನ್ನು ತನ್ನ ರಾಜ್ಯಕ್ಕೆ ಸೇರಿಸಿದ ಕೂಡ. ಅಂದಿನಿಂದ ಈ ಜಿಲ್ಲೆಯ ಪ್ರದೇಶ ಮೈಸೂರು ಸಂಸ್ಥಾನದಲ್ಲಿ ಮುಂದುವರಿಯಿತು. ಆದರೆ ಸಂಸ್ಥಾನದ ರಾಜಧಾನಿಯನ್ನು ಟಿಪ್ಪುವಿನ ಮರಣಾನಂತರ ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾಯಿಸಲಾಗಿ ಅದು ತನ್ನ ಪ್ರತಿಷ್ಠೆ ಕಳೆದುಕೊಂಡಿತು. 

	19ನೆಯ ಶತಮಾನದ ಆದಿಭಾಗದಲ್ಲಿ ಮೈಸೂರು ಸಂಸ್ಥಾನದಲ್ಲಿ 6 ಫೌಜುದಾರಿ ವಿಭಾಗಗಳಿದ್ದುವು. ಈಗಿನ ಮಂಡ್ಯ ಜಿಲ್ಲೆಯ ಭಾಗ ಆಗ ಅಷ್ಟಗ್ರಾಮ ಫೌಜುದಾರಿಗೆ ಸೇರಿತ್ತು. ಬ್ರಿಟಿಷ್ ಕಮಿಷನ್ ಆಡಳಿತದಲ್ಲಿದ್ದ ಕಾಲ, ಸಂಸ್ಥಾನವನ್ನು ಜಿಲ್ಲೆಗಳಾಗಿ ವಿಂಗಡಿಸಿದಾಗ ಈಗಿನ ಮಂಡ್ಯ ಜಿಲ್ಲೆಯ ಪ್ರದೇಶ ಮೈಸೂರು ಜಿಲ್ಲೆಗೆ ಸೇರಿತ್ತು. ಮುಂದೆ ಮೈಸೂರು ಜಿಲ್ಲೆಯಿಂದ ಕೆಲವು ತಾಲ್ಲೂಕುಗಳನ್ನು ಪ್ರತ್ಯೇಕಿಸಿ ಈಗಿನ ಮಂಡ್ಯಜಿಲ್ಲೆಯನ್ನು ರಚಿಸಲಾಯಿತು (1949 ಜುಲೈ 1).

	ಸ್ವಾತಂತ್ರ್ಯ ಹೋರಾಟದಲ್ಲಿ ಈ ಜಿಲ್ಲೆ ಗಣನೀಯ ಪಾತ್ರವಹಿಸಿತ್ತು. ಏಪ್ರಿಲ್ 1938ರಲ್ಲಿ ಮದ್ದೂರಿನ ಬಳಿಯ ಶಿವಪುರದಲ್ಲಿ ಕಾಂಗ್ರೆಸ್ ಸಭೆಸೇರಿ ಜವಾಬ್ದಾರಿ ಸರ್ಕಾರಕ್ಕಾಗಿ ಹೋರಾಡಲು ನಿರ್ಧರಿಸಿತು. (ಅದರ e್ಞÁಪಕಾರ್ಥವಾಗಿ ಈಗ ಅಲ್ಲಿ ಒಂದು ಸ್ಮಾರಕ ಸಿದ್ಧಗೊಂಡಿದೆ.) 1942ರ ಭಾರತಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಚಳವಳಿಯಲ್ಲಿ ಅನೇಕ ಕಾಂಗ್ರೆಸ್ ಮತ್ತೆ ಮಂಡ್ಯ ಬಳಿಯ ಉಮ್ಮಡಹಳ್ಳಿ ಬಳಿ ಸಭೆಸೇರಿತ್ತು. ಸ್ವರಾಜ್ಯ ಸಾಧನೆಗೆ ತಮ್ಮ ಅಮೂಲ್ಯ ಕಾಣಿಕೆ ಸಲ್ಲಿಸಿರುವರು. ಈ ಜಿಲ್ಲೆಯ ಸ್ವಾತಂತ್ರ್ಯ ಚಳವಳಿಯ ನೇತಾರರಲ್ಲಿ ಎಚ್.ಹೊನ್ನಯ್ಯ, ಎಚ್.ಕೆ. ವೀರಣ್ಣಗೌಡ, ಸಾಹುಕಾರ್ ಎಸ್.ಚನ್ನಯ್ಯ ಮತ್ತು ಕೆ.ವಿ.ಶಂಕರಗೌಡ ಪ್ರಸಿದ್ಧರಾಗಿದ್ದಾರೆ.

	ಜಿಲ್ಲೆಯ ಮುಖ್ಯಸ್ಥಳಗಳಲ್ಲಿ ತಾಲ್ಲೂಕು ಕೇಂದ್ರಗಳಲ್ಲದೆ, ಬೆಳಕವಾಡಿ, ಬೆಳ್ಳೂರು ಮತ್ತು ಮೇಲುಕೋಟೆ ಇವು ಪಟ್ಟಣಗಳೆಂದು ಪರಿಗಣಿತವಾಗಿದೆ. ಜಿಲ್ಲೆಯಲ್ಲಿ ಅನೇಕ ಪ್ರೇಕ್ಷಣೀಯ ಮತ್ತು ಇತಿಹಾಸ ಪ್ರಸಿದ್ಧ ಸ್ಥಳಗಳಿವೆ, 1610ರಿಂದ 1799ರ ತನಕ ಮೈಸೂರು ಸಂಸ್ಥಾನದ ರಾಜಧಾನಿಯಾಗಿ ಮೆರೆದು ಹೈದರ್ ಮತ್ತು ಟಿಪ್ಪುಸುಲ್ತಾನರ ಭದ್ರನೆಲೆಯಾಗಿದ್ದ ಶ್ರೀರಂಗಪಟ್ಟಣ, ಕಾವೇರಿಯ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳಿರುವ ಶಿವಸಮುದ್ರ, ಸುಂದರ ಉದ್ಯಾನದಿಂದ ಕಂಗೊಳಿಸುವ ಕೃಷ್ಣರಾಜಸಾಗರ ಇವು ಪ್ರಸಿದ್ಧವಾಗಿವೆ. ಶ್ರೀರಂಗಪಟ್ಟಣದ ಬಳಿ ಇರುವ ರಂಗನತಿಟ್ಟು ಪ್ರಸಿದ್ಧ ಪಕ್ಷಿಧಾಮ. ರಾಮಾನುಜಾಚಾರ್ಯರು ನೆಲಸಿದ್ದರೆನ್ನಲಾದ ಮೇಲುಕೋಟೆ ಮತ್ತು ತೊಣ್ಣೂರು ಹಾಗೂ ಶ್ರೀರಂಗ ಪಟ್ಟಣ ಯಾತ್ರಾಸ್ಥಳಗಳು. ಗಂಗರ ಕಾಲದ ಸುಂದರ ಬಸದಿಗಳಿರುವ ಕಂಬದ ಹಳ್ಳಿ ಜೈನರಿಗೆ ಪವಿತ್ರಸ್ಥಳ. ಅಗ್ರಹಾರ ಬಾಚಹಳ್ಳಿ, ಅಘಲಯ, ಹೊಸ ಹೊಳಲು, ಕಿಕ್ಕೇರಿ, ಮಾದಪುರ ಮತ್ತು ತೆಂಗಿನಘಟ್ಟ, ಬೆಳ್ಳೂರು, ದೊಡ್ಡ ಜಟಕ ಮತ್ತು ನಾಗಮಂಗಲ, ಬಸರಾಳು__ಈ ಸ್ಥಳಗಳಲ್ಲಿ ಹೊಯ್ಸಳ ಕಾಲದ ಸುಂದರ ದೇವಾಲಯಗಳಿವೆ. ಮದ್ದೂರು ಮತ್ತು ಮಾರೇಹಳ್ಳಿಗಳಲ್ಲಿ ಚೋಳರ ಕಾಲದ ದೇವಾಲಯಗಳಿವೆ. ನಾಗಮಂಗಲ ಮತ್ತು ಪಾಲಗ್ರಹಾರಗಳಲ್ಲಿ ಪಾಳೆಯಗಾರರ ಕಾಲದ ದೇವಾಲಯಗಳಿವೆ.

ತಾಲ್ಲೂಕು : ಜಿಲ್ಲೆಯ ದಕ್ಷಿಣದ ಕಡೆಗಿರುವ ಈ ತಾಲ್ಲೂಕನ್ನು ದಕ್ಷಿಣದಲ್ಲಿ ಶ್ರೀರಂಗಪಟ್ಟಣ, ತಿರುಮಕೂಡಲು ನರಸೀಪುರ ಮತ್ತು ಮಳವಳ್ಳಿ ತಾಲ್ಲೂಕುಗಳೂ ಪೂರ್ವದಲ್ಲಿ ಮದ್ದೂರು, ಉತ್ತರದಲ್ಲಿ ನಾಗಮಂಗಲ ಮತ್ತು ಪಶ್ಚಿಮದಲ್ಲಿ ಪಾಂಡವಪುರ ತಾಲ್ಲೂಕುಗಳೂ ಸುತ್ತುವರಿದಿವೆ. ಕೆರೆಗೋಡು, ಮಂಡ್ಯ, ಬಸರಾಳು, ದುದ್ಧ ಮತ್ತು ಕೊತ್ತತ್ತಿ ಹೋಬಳಿಗಳು. ಒಂದು ಪಟ್ಟಣ ಮತ್ತು 183 ಗ್ರಾಮಗಳಿರುವ ಈ ತಾಲ್ಲೂಕಿನ ವಿಸ್ತೀರ್ಣ 715.1 ಚಕಿಮೀ. 2,06,199 ಮಂದಿ ಪುರುಷರು 199,699 ಮಂದಿ ಮಹಿಳೆಯರಿರುವ ಈ ತಾಲ್ಲೂಕಿನ ಜನಸಂಖ್ಯೆ 4,05,898 (2001). ಇದರಲ್ಲಿ 2,74,687 ಮಂದಿ ಗ್ರಾಮಸ್ಥರು, ಉಳಿದ 1,31,211 ಮಂದಿ ಪಟ್ಟಣ ವಾಸಿಗಳು.

	ತಾಲ್ಲೂಕು ಸಾಮಾನ್ಯವಾಗಿ ಮೈದಾನ ಪ್ರದೇಶ. ಹೆಸರಿಸುವಂಥ ಬೆಟ್ಟಗುಡ್ಡಗಳಿಲ್ಲ. ಲೋಕಪಾವನಿ ನದಿ ತಾಲ್ಲೂಕಿನ ಪಶ್ಚಿಮಭಾಗದಲ್ಲಿ ಸ್ವಲ್ಪದೂರ ಹರಿದು ಅನಂತರ ತಾಲ್ಲೂಕಿನ ಅಂಚಿನಲ್ಲಿ ಪಾಂಡವಪುರ ತಾಲ್ಲೂಕನ್ನು ಬೇರ್ಪಡಿಸುವ ಗಡಿಯಾಗಿ ದಕ್ಷಿಣಾಭಿಮುಖವಾಗಿ ಹರಿಯುವುದು. ಈ ತಾಲ್ಲೂಕಿನಲ್ಲಿ ಹೆಚ್ಚಾಗಿ ಮರಳು ಮಿಶ್ರಿತ ಕೆಂಪು ಜೇಡಿಮಣ್ಣಿನ ಭೂಮಿ ಇದೆ. ವಾರ್ಷಿಕ ಮಳೆ 859.8 ಮಿಮೀ. ತಾಲ್ಲೂಕಿನಲ್ಲಿ ಅರಣ್ಯ ಪ್ರದೇಶವಿಲ್ಲ.

	ವಿಶ್ವೇಶ್ವರಯ್ಯ ನಾಲೆಯಿಂದ ಈ ತಾಲ್ಲೂಕಿಗೆ ನೀರೊದಗಿ ಕೃಷಿ ಪ್ರಗತಿದಾಯಕವಾಗಿದೆ. ಹುಲಿಕೆರೆ ಬಳಿ ಕರಿಘಟ್ಟ ಶ್ರೇಣಿಯ ಬೆಟ್ಟಕ್ಕೆ 2805 ಮೀ ಉದ್ದದ ಸುರಂಗ ಕೊರೆದು ವಿಶ್ವೇಶ್ವರಯ್ಯ ನಾಲೆಯ ನೀರು ಹರಿಯಬಿಟ್ಟಿದೆ. ಈ ಸುರಂಗದ ಆಳ ನೆಲಮಟ್ಟದಿಂದ ಕೆಳಗೆ 20.5-46ಮೀ ಗಳ ವರೆಗೆ ಇದೆ. ಪ್ರಪಂಚದ ಅತ್ಯಂತ ಉದ್ದವಾದ ನೀರಾವರಿ ಸುರಂಗಗಳಲ್ಲಿ ಇದೊಂದು. ಬತ್ತ, ರಾಗಿ, ಜೋಳ, ಕಬ್ಬು ಇಲ್ಲಿಯ ಪ್ರಮುಖ ಬೆಳೆಗಳು. ಕೃಷಿಗೆ ಸಂಬಂಧಿಸಿದಂತೆ ಹೊಸ ಪ್ರಯೋಗಗಳನ್ನು ಇಲ್ಲಿ ನಡೆಸಲಾಗಿದೆ. 1965ರಿಂದ ಇಲ್ಲಿ ಇಂಡೊಜಪಾನೀಸ್ ಕೃಷಿ ಪ್ರದರ್ಶನಾ ಕ್ಷೇತ್ರವಿದ್ದು ತರುಣ ಕೃಷಿಗಾರರಿಗೆ ಮಾರ್ಗದರ್ಶನ ನೀಡುತ್ತಿದೆ. ಇದಲ್ಲದೆ ಕೆಲವು ಸರ್ಕಾರಿ ವ್ಯವಸಾಯಾಭಿವೃದ್ಧಿ ಕಾರ್ಯಕ್ರಮಗಳಿಗೂ ಈ ತಾಲ್ಲೂಕು ಸೇರಿದೆ.

	ಈ ತಾಲ್ಲೂಕು ಕೈಗಾರಿಕೆಯಲ್ಲಿ ಜಿಲ್ಲೆಯಲ್ಲೇ ಪ್ರಥಮಸ್ಥಾನ ಪಡೆದಿದೆ. ಹೆಚ್ಚು ಕೈಗಾರಿಕೆಗಳಿರುವುದು ಮಂಡ್ಯ ಪಟ್ಟಣ ಮತ್ತು ಅದರ ಪರಿಸರದಲ್ಲಿ. ಬೆಲ್ಲದ ತಯಾರಿಕೆ ಉಂಟು. ರಾಸಾಯನಿಕ ಮತ್ತು ಉಪಯುಕ್ತ ವಸ್ತುಗಳ ತಯಾರಿಕೆಯೂ ಇದೆ. ಅಕ್ಕಿಗಿರಣಿಗಳಿವೆ. ರೇಷ್ಮೆ ಸಾಕಣೆ ಈ ತಾಲ್ಲೂಕಿನಲ್ಲೂ ಪ್ರಚಲಿತ. ಇಲ್ಲಿಂದ ಅಕ್ಕಿ, ಸಕ್ಕರೆ, ಮಧ್ಯ ಇವು ಹೆಚ್ಚಾಗಿ ರಫ್ತಾಗುತ್ತವೆ. ಸಿಮೆಂಟ್, ಬಟ್ಟೆ, ಯಂತ್ರೋಪಕರಣಗಳು ಹೆಚ್ಚಾಗಿ ಆಮದಾಗುವ ಪದಾರ್ಥಗಳು. ವ್ಯಾಪಾರ ವಾಣಿಜ್ಯಕ್ಕೆ ಆರ್ಥಿಕಸಹಕಾರ ನೀಡಲು ತಾಲ್ಲೂಕಿನಲ್ಲಿ ನಾನಾ ಬಗೆಯ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿವೆ. 

	ಮೈಸೂರು - ಬೆಂಗಳೂರುಗಳ ನಡುವೆ ಇರುವ ಮಂಡ್ಯ ತಾಲ್ಲೂಕು ವ್ಯಾಪಾರ ವಾಣಿಜ್ಯದಲ್ಲಿ ಮುಂದುವರಿಯಲು ಅದರ ಭೌಗೋಳಿಕ ಪರಿಸರವೂ ಮುಖ್ಯಕಾರಣ. ತಾಲ್ಲೂಕಿನ ದಕ್ಷಿಣದಲ್ಲಿ ನೈಋತ್ಯ ಈಶಾನ್ಯವಾಗಿ ಮೈಸೂರು - ಬೆಂಗಳೂರು ರೈಲುದಾರಿ ಮತ್ತು ರಾಜ್ಯ ಹೆದ್ದಾರಿ ಹಾದುಹೋಗಿವೆ. ಮಂಡ್ಯ.ದಿಂದ ಬನ್ನೂರು, ನಾಗಮಂಗಲ, ಶಿವಳ್ಳಿ ಮತ್ತು ಕೆರೆಗೋಡುಗಳಿಗೆ ಹೋಗುವ ರಸ್ತೆಗಳೂ ತಾಲ್ಲೂಕಿನ ಇತರ ಮುಖ್ಯ ಹಾದಿಗಳು.

	ತಾಲ್ಲೂಕಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳಿವೆ. ತಾಲ್ಲೂಕಿನಲ್ಲಿ ಕೇಂದ್ರದಲ್ಲಿ ಎಂಜಿನಿಯರಿಂಗ್, ಕಲೆ, ವಿe್ಞÁನ ಕಾಲೇಜುಗಳಿವೆ. ವಿದ್ಯುತ್, ಅಂಚೆ ತಂತಿ, ದೂರವಾಣಿ ಮುಂತಾದವೂ ಮತ್ತು ಆಸ್ಪತ್ರೆ ಔಷಧಾಲಯ ಮುಂತಾದ ವೈದ್ಯಕೀಯ ಸೌಲಭ್ಯಗಳೂ ಇವೆ. ಮಂಡ್ಯಕ್ಕೆ ಈಶಾನ್ಯದಲ್ಲಿ 8 ಕಿಮೀ ದೂರದಲ್ಲಿರುವ ಬೆಳ್ಳಂಗೆರೆಯ ಬಳಿ ಪ್ರತಿ ಡಿಸೆಂಬರ್ ತಿಂಗಳಲ್ಲಿ ನಡೆಯುವ ಕಾಡುಬಸವೇಶ್ವರಸ್ವಾಮಿ ಜಾತ್ರೆ ಬಲುಪ್ರಸಿದ್ಧ. ಮಂಡ್ಯದ ನೈಋತ್ಯದಲ್ಲಿ 7 ಕಿಮೀ ದೂರದಲ್ಲಿರುವ ಸುಂಡಹಳ್ಳಿಯಲ್ಲಿ ಪ್ರತಿವರ್ಷ ದೀಪಾವಳಿಯ ಕಾಲದಲ್ಲಿ ಮಹದೇಶ್ವರಸ್ವಾಮಿ ರಥೋತ್ಸವ ನಡೆಯುತ್ತದೆ. ಬಸರಾಳು ಈ ತಾಲ್ಲೂಕಿನ ಒಂದು ಮುಖ್ಯ ಗ್ರಾಮ. ಮಂಡ್ಯದಿಂದ 14 ಕಿಮೀ ದೂರದಲ್ಲಿರುವ ಕೆರೆಗೋಡಿನಲ್ಲಿ ಪ್ರತಿ ಫೆಬ್ರುವರಿ ತಿಂಗಳಿನಲ್ಲಿ ಪಂಚಲಿಂಗೇಶ್ವರ ಜಾತ್ರೆ ತಾಲ್ಲೂಕಿನ ಮುಖ್ಯ ಜಾತ್ರೆಗಳಲ್ಲೊಂದು. ಮಂಡ್ಯದ ಈಶಾನ್ಯಕ್ಕೆ 16ಕಿಮೀ ದೂರದಲ್ಲಿರುವ ಶಿವಾರಗ್ರಾಮದ ಬಳಿ ಇರುವ ವಿದ್ಯಾಪೀಠದಲ್ಲಿ ಕ್ಷೀರೋದ್ಯಮ ಶಿಕ್ಷಣ ತರಬೇತಿ ನೀಡಲಾಗುತ್ತದೆ.

ಪಟ್ಟಣ : ಮಂಡ್ಯ ಜಿಲ್ಲೆಯ ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ ಮತ್ತು ಮುಖ್ಯಪಟ್ಟಣ. ಮೈಸೂರು-ಬೆಂಗಳೂರು ರೈಲು ಮತ್ತು ರಾಜ್ಯ ಹೆದ್ದಾರಿಯಲ್ಲಿ ಮೈಸೂರು ನಗರದ ಈಶಾನ್ಯಕ್ಕೆ 42 ಕಿಮೀ ದೂರದಲ್ಲೂ ಬೆಂಗಳೂರಿನ ನೈಋತ್ಯಕ್ಕೆ 100 ಕಿಮೀ ದೂರದಲ್ಲೂ ಇದೆ. ಜನಸಂಖ್ಯೆ 1,31,211 (2001). ಪಟ್ಟಣ ಸಮುದ್ರಮಟ್ಟದಿಂದ 671 ಮೀ ಎತ್ತರದಲ್ಲಿದ್ದು ವಾಯುಗುಣ ಹಿತಕರವಾಗಿದೆ.

	ಇದು ಜಿಲ್ಲೆಯ ಪ್ರಮುಖ ಔದ್ಯಮಿಕ ಮತ್ತು ವ್ಯಾಪಾರ ಕೇಂದ್ರ. ಇಲ್ಲಿ ಮಂಡ್ಯ ಸಕ್ಕರೆ ಕಾರ್ಖಾನೆ (ಮೈಸೂರು ಷುಗರ್ ಕಂಪನಿ) ಅದಕ್ಕೆ ಹೊಂದಿಕೊಂಡಂತೆಯೇ ಇರುವ ಮದ್ಯಸಾರದ ಮತ್ತು ಮದ್ಯ ತಯಾರಿಕಾ ಕಾರ್ಖಾನೆ ಇವೆ. ಇವೆರಡೂ ಭಾರತದಲ್ಲಿ ಆ ಬಗೆಯ ಪ್ರಥಮ ಆಧುನಿಕ ಕಾರ್ಖಾನೆಗಳು. ಮೈಸೂರು ಅಸಿಟೇಟ್ ಅಂಡ್ ಕೆಮಿಕಲ್ಸ್ ಫ್ಯಾಕ್ಪರಿ, ಆಧುನಿಕ ಅಕ್ಕಿಗಿರಣಿ, ಉಪಕರಣ ಕಾರ್ಖಾನೆ, ಸಣ್ಣ ಪ್ರಮಾಣದ ಮೈಸೂರು ಮೆಟಲ್ ಇಂಡಸ್ಟ್ರೀಸ್, ಮಂಡ್ಯ ಎಂಜಿನಿಯರಿಂಗ್ ವಕ್ರ್ಸ್, ಮೈಸೂರು ಮಿನರಲ್ಸ್ ಅಂಡ್ ಗ್ಯಾಸ್ ಕಂಪನಿ ಮುಂತಾದವುಗಳಿವೆ. ಮಂಡ್ಯದಿಂದ ಜಿಲ್ಲೆಯ ಎಲ್ಲ ಪಟ್ಟಣ ಗ್ರಾಮಗಳಿಗೂ ಮತ್ತು ರಾಜ್ಯದ ಇತರ ಜಿಲ್ಲಾ ಕೇಂದ್ರಗಳಿಗೂ ಉತ್ತಮ ಮಾರ್ಗ ಸಂಪರ್ಕವಿದೆ ಇಲ್ಲಿ ರೈಲು ನಿಲ್ದಾಣವಿದ್ದು ವ್ಯಾಪಾರ ವಾಣಿಜ್ಯದ ಪ್ರಗತಿಗೆ ನೆರವಾಗಿದೆ.

	ಜಿಲ್ಲೆಯ ಮುಖ್ಯ ಪಟ್ಟಣವಾಗಿರುವುದರಿಂದ ಇಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತಾಂಗವಾಗಿ ಕೆಳವು ಕಚೇರಿಗಳಿವೆ. ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳೂ ಸಹಕಾರ ಸಂಘಗಳೂ ನಿಯಂತ್ರಿತ ಮಾರುಕಟ್ಟೆ, ಸರ್ಕಾರಿ ಆಸ್ಪತ್ರೆ ಮತ್ತು ಔಷಧಾಲಯ, ಅಂಚೆ ತಂತಿ, ದೂರವಾಣಿ ಮತ್ತು ವಿದ್ಯುತ್ತಿನ ಸೌಲಭ್ಯಗಳೂ ಇವೆ. ವ್ಯಾಪಕ ಶಿಕ್ಷಣ ಸೌಲಭ್ಯವಿದೆ. ತಲಾ ಒಂದು ಎಂಜಿನಿಯರಿಂಗ್ ಕಲೆ ಮತ್ತು ವಿe್ಞÁನ ಕಾಲೇಜು ಇವೆ.

	ಈ ಪಟ್ಟಣ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಅಭಿವೃದ್ಧಿ ಮಂಡಳಿಯ ಯೋಜನೆಯಂತೆ ಪಟ್ಟಣದ ಸುತ್ತಲೂ ಹೊಸ ವಿಸ್ತರಣೆಗಳಾಗುತ್ತಿವೆ. ಕೃಷ್ಣ ರಾಜಸಾಗರದ ನಿರ್ಮಾಣವಾದ ಅನಂತರ ಮಂಡ್ಯ ಪಟ್ಟಣ ಹೆಚ್ಚು ಪ್ರಾಮುಖ್ಯ ಪಡೆಯಿತು. ಮಂಡ್ಯ ಜಿಲ್ಲೆಯ ನಿರ್ಮಾಣದೊಂದಿಗೆ (1939 ಜುಲೈ 1) ಇದು ಜಿಲ್ಲಾ ಆಡಳಿತ ಕೇಂದ್ರವಾಯಿತು. ಇಲ್ಲಿ ನಗರಸಭಾ ಆಡಳಿತವಿದೆ.

	ಇಲ್ಲಿಯ ಜನಾರ್ದನಸ್ವಾಮಿ ದೇವಾಲಯ ಸ್ಥಳೀಯವಾಗಿ ಪ್ರಸಿದ್ಧವಾದುದು. ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಇಲ್ಲಿ ರಥೋತ್ಸವ ನಡೆಯುತ್ತದೆ. ಸ್ಥಳಪುರಾಣದ ಪ್ರಕಾರ ಈ ಊರು ಕೃತಯುಗದಲ್ಲಿ ವೇದಾರಣ್ಯ. ದ್ವಾಪರ ಯುಗದಲ್ಲಿ ಇಂದ್ರವರ್ಮನೆಂಬ ರಾಜ ಇಲ್ಲಿಗೆ ಬಂದು ತಪಸ್ಸು ಮಾಡಿದ. ಅದರ ಫಲವಾಗಿ ಜನಿಸಿದ ಅವನ ಮಗ ಸೋಮವರ್ಮ ಇಲ್ಲಿ ಕೋಟೆ ಮತ್ತು ಅಗ್ರಹಾರ ಕಟ್ಟಿಸಿ ಇದಕ್ಕೆ ಮುಂಡೇವೇಮು ಎಂದು ಹೆಸರಿಟ್ಟ. ಇದೇ ಮುಂದೆ ಮಂಡ್ಯವಾಯಿತು ಎಂಬ ಪ್ರತೀತಿ.
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ